Friday, September 9, 2016

Idiot Box - ಮೂರ್ಖರ ಪೆಟ್ಟಿಗೆ

ಮೂರ್ಖರ ಪೆಟ್ಟಿಗೆ
ಈ ಶತಮಾನದ ಒಂದು ಅದ್ಬುತ ಆವಿಷ್ಕಾರ ಟೆಲಿವಿಷನ್. ಧ್ವನಿ ಮತ್ತು ದ್ ಮಾಧ್ಯಮಗಳ ಅಪೂರ್ವ ಸಂಗಮ. ನಮಗೆ ನಮ್ಮ ದೈನಂದಿನ ತಲೆಬಿಸಿಗಳಿಂದ ಬಿಡುಗಡೆ ಕೊಡುವ ಮನೋರಂಜನಾ ಸಾಧನವಾಗಿ ನಮ್ಮ ಮನೆಗಳಲ್ಲಿ ಪ್ರವೇಶ ಪಡೆದ ಟಿ.ವಿ., ಇಂದು ನಮ್ಮೆಲ್ಲರ ಬದುಕಿನ ಒಂದು ಅವಿಭಾಜ್ಯ ಅಂಗವಾಗಿದೆ. ಎಷ್ಟೋ ಮನೆಗಳಲ್ಲಿ, ಬೆಳಿಗ್ಗೆ ಹಲ್ಲು ಉಜ್ಜುವ ಮೊದಲೇ ಟಿ.ವಿ. ಚಾಲೂ ಆಗ್ತದೆ. ಇದರ ಪ್ರಭಾವ ಎಷ್ಟಿದೆ ಅಂದ್ರೆ, ರಜಾದಿನಗಳಲ್ಲಿ ಕೆಲವು ಮನೆಗಳಲ್ಲಿ outings, socializing, ಎಲ್ಲಾ ಕೆಲವು ಟಿ.ವಿ ಕಾರ್ಯಕ್ರಮಗಳ ಮೇಲೆ ನಿರ್ಧಾರವಾಗುತ್ತದೆ.
ನಾನು ಟಿ.ವಿ ದ್ವೇಷಿಯಲ್ಲ. ಹಾಗೇ ಟಿ.ವಿ. ವ್ಯಸನಿಯೂ ಅಲ್ಲ. ಇಲ್ಲಿ ನಾನು ಟಿ.ವಿ ವೀಕ್ಷಣೆಯಿಂದಾಗುವ ಒಳಿತು, ಕೆಡಕುಗಳನ್ನ ಪ್ರಸ್ತಾಪ ಮಾಡ್ತಾ ಇಲ್ಲ. ಒಂದು ’nuclear familiy’ ಯಲ್ಲಿ ಹೇಗೆ ಇದರ ಪ್ರಭಾವ ಮತ್ತು ಹಿಡಿತ ಇದೆ ಅನ್ನೋದನ್ನ ವ್ಯಕ್ತಪಡಿಸಲು ಪ್ರಯತ್ನ ಮಾಡಿದ್ದೇನೆ.

ಈಗೀಗ ಇರುವಂತಹ ಚಾನಲ್ ಗಳು, ಅದರಲ್ಲಿ ಬರುವಂತಹ ಕಾರ್ಯಕ್ರಮಗಳು ಒಂದಕ್ಕಿಂತ ಒಂದು ಚೆನ್ನಾಗಿರುತ್ತದೆ. ಉಪಯುಕ್ತ ಮಾಹಿತಿಗಳನ್ನ ಕೊಡುತ್ತದೆ. ಒಳ್ಳೆಯ ಮನೋರಂಜನೆಯೂ ಆಗುತ್ತದೆ. ಹಾಗಾಗಿ, ಹೆಚ್ಚು ಹೆಚ್ಚು ಕುಟುಂಬಗಳು ಟಿ.ವಿ.ಯ ವ್ಯಸನಿಗಳಾಗಿದ್ದಾರೆ. ಮಕ್ಕಳಂತೂ ಕಾರ್ಟೂನ್ ಚಾನೆಲ್, ಪೋಗೋ ಚಾನೆಲ್ಗಳಲ್ಲಿ ಮುಳುಗಿರುತ್ತಾರೆ. ಉಪಯುಕ್ತ ಮಾಹಿತಿ, ವಿಚಾರಗಳನ್ನ ಕೊಡುವಂತಹ ಡಿಸ್ಕವರಿ, ಹಿಸ್ಟರಿ, ನ್ಯಾಶನಲ್ ಜಿಯೋಗ್ರಾಫಿಕ್ ಮುಂತಾದ ಚಾನೆಲ್ ಗಳನ್ನು ನೋಡಿದರೆ ಮನೋರಂಜನೆಯ ಜೊತೆಗೆ ಮಾಹಿತಿ ಸಂಗ್ರಹಣವೂ ಆಗುತ್ತದೆ. ಆದರೆ, ಸಮಯ ವ್ಯಯ ಮಾಡುವಂತಹ ಉಪಯೋಗವಿಲ್ಲದ ಕಾರ್ಟೂನ್ ಚಾನಲ್ ಗಳೇ ಹೆಚ್ಚು ಪ್ರೀತಿ ಮಕ್ಕಳಿಗೆ. ಇದರಿಂದಾಗಿ ಇಂದು ಮಕ್ಕಳು ಹೊರಾಂಗಣ ಆಟಗಳನ್ನು ಆಡುವುದನ್ನೇ ಬಿಡುತ್ತಿದ್ದಾರೆ. ಎಷ್ಟೋ ಗ್ರಾಮೀಣ ಹೊರಾಂಗಣ ಆಟಗಳಾದ ಗೋಲಿ, ಚಿನ್ನಿದಾಂಡು, ಲಗೋರಿ, ಮರಕೋತಿಯಾಟಗಳು ಪಟ್ಟಣದಲ್ಲಷ್ಟೇ ಅಲ್ಲ, ಹಳ್ಳಿಗಳಲ್ಲೂ ಮರೆಯಾಗಿವೆ. ಮಕ್ಕಳು ದೈಹಿಕ ವ್ಯಾಯಾಮ ಆಗುವಂತಹ ಆಟಗಳನ್ನು ಆಡದೆ, ಹೆಚ್ಚಾಗಿ ಟಿ.ವಿ. ನೋಡುವುದು, ವಿಡಿಯೋ ಗೇಮ್ಸ್ ಆಡುವುದು ಮಾಡುತ್ತಿರುವುದರಿಂದ ಸಣ್ಣ ವಯಸ್ನಿನಲ್ಲೇ ಬೊಜ್ಜು, ಸ್ಥೂಲಕಾಯ, ಸಕ್ಕರೆಕಾಯಿಲೆ, ಮುಂತಾದ ಸ್ವಾಸ್ಥ್ಯ ಸಂಬಂಧಿ ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ. 

ಇತ್ತೀಚಿನ ಇನ್ನೊಂದು ಬೆಳವಣಿಗೆಯೆಂದರೆ, ಮೊಬೈಲ್ ಮತ್ತು ಟ್ಯಾಬ್ಲೆಟ್ ಬಳಕೆ ಮಕ್ಕಳಲ್ಲಿ ಹೆಚ್ಚುತ್ತಿರುವುದು. ಇದರಿಂದ ಮಕ್ಕಳು ನೆರೆಕರೆಯವರೊಂದಿಗೆ, ನೆಂಟರಿಷ್ಟರೊಂದಿಗೆ ಮಾತನಾಡಲು, ಬೆರೆಯಲು ಕಷ್ಟಪಡುತ್ತಿದ್ದಾರೆ. ಅವರ ಸಂವಹನಾ ಕೌಶಲ್ಯಗಳು ವಿಕಸನಗಳ್ಳದೇ ಮುಂದೆ ದೊಡ್ಡವರಾಗುತ್ತಾ ತೊಂದರೆ ಅನುಭವಿಸುತ್ತಾರೆ. ಮನೆಯಲ್ಲಿದ್ದಾಗ ಟಿ.ವಿ, ಟ್ಯಾಬ್ ಗಳು, ಹೊರಗೆ ಹೋದಾಗ ಮೊಬೈಲ್ ನಲ್ಲೇ ಮುಳುಗಿ ಹಾಳಾಗುತ್ತಿದ್ದಾರೆ.

ಇವೆಲ್ಲಾ ಈಗಿನ ಯುಗದ ಆವಿಶ್ಕಾರಗಳು. ಅವುಗಳನ್ನು ಜೀವನದ ಒಂದು ಸಾಧನವಾಗಿ ಉಪಯೋಗಿಸಿಕೊಳ್ಳಬೇಕೇ ಹೊರತು ಅವುಗಳಲ್ಲೇ ಜೀವನ ಎಂದೋ ಅವುಗಳೇ ಜೀವನ ಅಂತ  ಅಂಟಿಕೊಳ್ಳಬಾರದು.